ಜಾರ್ಜಿಯನ್ ಸಾಹಿತ್ಯ -
ಕ್ರೈಸ್ತಧರ್ಮದ ಪ್ರವೇಶದೊಂದಿಗೆ ಜಾರ್ಜಿಯನ್ ಸಾಹಿತ್ಯದ ಉಗಮವೂ ಆಗತೊಡಗಿತು. ಹೀಗಾಗಿ ಪ್ರಾಚೀನ ಜಾರ್ಜಿಯನ್ ಸಾಹಿತ್ಯ ಧಾರ್ಮಿಕ ಸಾಹಿತ್ಯವಾಗಿರುವುದು ಅನಿವಾರ್ಯವೇ ಆಯಿತು. ಆರ್ಮೇನಿಯನ್ ಆವೃತ್ತಿಯನ್ನು ಆಧಾರವಾಗಿಟ್ಟುಕೊಂಡು ಕ್ರಿ.ಶ. ಐದನೆಯ ಶತಮಾನದಲ್ಲಿ ಸುವಾರ್ತೆಗಳನ್ನೂ ಇದಾದ ತರುಣದಲ್ಲಿಯೇ ಸ್ತೋತ್ರಗೀತೆಗಳನ್ನೂ ಭಾಷಾಂತರಿಸಲಾಯಿತು. ಅಂತೆಯೇ ನಯಸಾದ ಗ್ರೆಗೊರಿ, ನಜóಯಾಂಜುಸ್‍ನ ಗ್ರೆಗೊರಿ, ಜಾನ್ ಕ್ರಿಸೋಸ್ಟೋಮ್ ಮೊದಲಾದ ಗ್ರೀಕ್ ಪಾದ್ರಿಗಳ ಕೃತಿಗಳನ್ನೂ ಭಾಷಾಂತರಿಸಲಾಯಿತು. ಮೌಲಿಕ ಕೃತಿಗಳ ದೃಷ್ಟಿಯಿಂದ ಜಾರ್ಜಿಯನ್ ಸಾಹಿತ್ಯವನ್ನು ಪರಿಶೀಲಿಸಿದರೆ ನಮಗೆ ಕಾಣದೊರೆಯುವುದು ಸಂತರ ಜೀವನಚರಿತ್ರೆಗಳು. ಇವುಗಳಲ್ಲಿ ಇಂದು ಉಪಲಬ್ಧವಾಗಿರುವ ಮೊಟ್ಟಮೊದಲ ಕೃತಿಯ ಕಾಲ ಕ್ರಿ.ಶ.ಸು.480 ಎಂದು ಹೇಳಲಾಗಿದೆ. ವಖ್ತಾಂಗ್ ಗೋರ್ಗಾಸ್ಲಾನಿ ಎಂಬ ದೊರೆಯ ಸಾಹಸ ಕಾರ್ಯಗಳ ವರ್ಣನೆಯನ್ನೊಳಗೊಂಡಿರುವ ಅರ್ಧ-ಐತಿಹ್ಯ ಸ್ವರೂಪದ ಕೃತಿಯೂ ಪ್ರಾಚೀನ ಕೃತಿಗಳಲ್ಲಿ ಒಂದು. ಮುಂದೆ ಇದು ಜಾರ್ಜಿಯನ್ ಇತಿಹಾಸದ ಅಂಗವೂ ಆಗಿ ಪ್ರವೇಶ ಪಡೆಯಿತು. ಕ್ರಿ.ಶ.9ನೆಯ ಶತಮಾನದ ಹೊತ್ತಿಗೆ ಅರೇಬಿಯಾದ ಮುಖಾಂತರ ಇಲ್ಲಿಗೆ ತಲುಪಿದ ಬೌದ್ಧ ಐತಿಹ್ಯಗಳಿಗೆ ಕ್ರೈಸ್ತ ಧರ್ಮದ ಲೇಪನವನ್ನು ಕೊಟ್ಟು, ಅವನ್ನು ಆತ್ಮೀಕರಿಸಿಕೊಳ್ಳಲಾಯಿತು. ಇದಕ್ಕೆ ಉದಾಹರಣೆಯಾಗಿ, ಬಾರ್ಲಾಮ್ ಮತ್ತು ಜೋಸಫಾತ್ ಪ್ರಸಂಗಗಳನ್ನು ಉಲ್ಲೇಖಿಸಬಹುದು. ಜಾರ್ಜಿಯನ್ ಸಾಹಿತ್ಯದ ಸುವರ್ಣಯುಗ ಆರಂಭವಾದದ್ದು 12ನೆಯ ಶತಮಾನದಲ್ಲಿ. 13ನೆಯ ಶತಮಾನದ ಆದಿಭಾಗದವರೆಗೂ ಈ ಯುಗ ಮುಂದುವರಿಯಿತು. ಎರಡನೆಯ ಡೇವಿಡ್, ಮೂರನೆಯ ಜಾರ್ಜ್ ಹಾಗೂ ರಾಣಿ ತಮಾರಾ ಅವರ ಆಳ್ವಿಕೆಯ ಅವಧಿಯಲ್ಲಿ ಪರಮೋತ್ಕರ್ಷವನ್ನು ಕಂಡ ಈ ಸಾಹಿತ್ಯಿಕ ಚಟುವಟಿಕೆಗಳು ಮಂಗೋಲರಿಂದ ನಾಲ್ಕನೆಯ ಜಾರ್ಜ್ ಪರಾಜಿತನಾಗುವವರೆಗೆ ಅನಿರ್ಬಾಧಿತವಾಗಿ ನಡೆದುವು. ಈ ಯುಗದ ಅತ್ಯುತ್ಕøಷ್ಟ ಕೃತಿಯಾದ ಸೋತ್-ಅ-ರುಸ್ತವೆಲಿಯ ವೆಪ್-ಖಿಸ್-ತಾವೊಸಾನಿ ಎಂಬುದು ರಚಿತವಾದದ್ದು ರಾಣಿ ತಮಾರಾಳ ಆಳ್ವಿಕೆಯ ಅವಧಿಯಲ್ಲಿಯೇ. ದಿ ಮ್ಯಾನ್ ಇನ್ ದಿ ಪ್ಯಾಂತರ್ಸ್ ಸ್ಕಿನ್ ಎಂಬ ಹೆಸರಿನಲ್ಲಿ ಇದು ಇಂಗ್ಲಿಷ್‍ಗೂ ಭಾಷಾಂತರಗೊಂಡಿದೆ. ಈ ಯುಗದ ಇತರ ಗಮನಾರ್ಹ ಕೃತಿಗಳೆಂದರೆ ವಿಸ್ರಾಮಿಯಾನಿ (ವಿಸ್ ಮತ್ತು ರಾಮಿನ್ ಅವರ ಪ್ರೇಮಕಥೆಗಳು) ಮತ್ತು ಅಮೀರಾನ್-ದಾರೆಜನಿಯಾನಿ(ಮೋಸಸನ ಅದ್ಭುತ ಕಥೆಗಳು). ಈ ಕೃತಿಗಳೂ ಇಂಗ್ಲಿಷಿಗೆ ಭಾಷಾಂತರಗೊಂಡಿವೆ. ಇಷ್ಟಾಗಿಯೂ ಈ ರಚನೆಗಳು ಧಾರ್ಮಿಕ ಪರಿವೇಷದಿಂದ ಹೊರಬಂದಿಲ್ಲವೆಂದು ಹೇಳಲಾಗಿದೆ. ಎರಡನೆಯ ಡೇವಿಡ್ ಮತ್ತು ರಾಣಿ ತಮಾರಾಳನ್ನು ಕುರಿತ ಪ್ರಗಾಥಗಳೇ ಲೌಕಿಕ ರಚನೆಗಳೆಂದು ಹೇಳಬಹುದಾದಂಥವು. ಮಂಗೋಲರ ದಾಳಿಯಿಂದ ಅಸ್ತವ್ಯಸ್ತಗೊಂಡ ಈ ಚಟುವಟಿಕೆಗಳು ಪುನರುಜ್ಜೀವನಗೊಂಡದ್ದು ಮೂರು ಶತಮಾನಗಳ ಅನಂತರದಲ್ಲಿ- ಅಂದರೆ 17ನೆಯ ಶತಮಾನದಲ್ಲಿ, ಈ ಶ್ರೇಯಸ್ಸನ್ನು ಗಳಿಸಿದ ರಾಜಕವಿಗಳೆಂದರೆ ಮೊದಲನೆಯ ತೈಮೂರಾeóï (ಕ್ರಿ..ಶ.1589-1663) ಮತ್ತು ಆರ್ಚಿಲ್ (ಕ್ರಿ.ಶ.1643 ರಿಂದ 1713). ಹದಿನೆಂಟನೆಯ ಶತಮಾನದಲ್ಲಿ ತಮ್ಮ ಗಮನಾರ್ಹ ಸಾಹಿತ್ಯಿಕ ಚಟುವಟಿಕೆಗಳಿಂದ ಖ್ಯಾತಿಗಳಿಸಿದ ಕವಿಗಳೆಂದರೆ ಡೇವಿಡ್ ಗುರಾಮಿಶ್ ವಿಲಿ (ಕ್ರಿ.ಶ.1705 ರಿಂದ 1792) ಮತ್ತು ಬೆಸಾರಿಯೋ ಗಬಾಸ್‍ವಿಲಿ (ಕ್ರಿ.ಶ.1750 ರಿಂದ 1791) ಈ ಎಲ್ಲ ರಚನೆಗಳಲ್ಲಿ ಪರ್ಷಿಯನ್ ಸಂಸ್ಕøತಿಯ ಪ್ರಭಾವ ಕಾಣದೊರೆಯುತ್ತದೆ.

ಕ್ರಿ.ಶ.1801ರಲ್ಲಿ ರಷ್ಯನ್ನರು ಜಾರ್ಜಿಯವರನ್ನು ಆಕ್ರಮಿಸಿಕೊಂಡುದರ ಫಲವಾಗಿ ಹೊಸಗಾಳಿ ಬೀಸತೊಡಗಿತು. ಐರೋಪ್ಯ ಸಂಸ್ಕøತಿ ಹಾಗೂ ಬೌದ್ಧಿಕ ಜೀವನದ ಪ್ರಭಾವಕ್ಕೆ ಸಾಹಿತ್ಯಿಕ ರಂಗ ಅನುವಾಯಿತು. ಇದರ ಫಲವಾಗಿ ರೊಮ್ಯಾಂಟಿಕ್ ಕಾವ್ಯ ಉತ್ಕರ್ಷವನ್ನು ಪಡೆಯಿತು. ಅಲೆಕ್ಸಾಂಡರ್ ಶವ್‍ಚವದ್ಜೆ (ಕ್ರಿ.ಶ.1786-1846) ಈ ದೃಷ್ಟಿಯಿಂದ ಗಮನಾರ್ಹನಾಗಿರುವ ಕವಿ. ಬೈರನ್ ಮಾದರಿಯ ಭಾವಗೀತೆಗಳ ರಚನೆಯಲ್ಲಿ ನಿಕೊಲಾಸ್‍ಬರಾತ್-ಆಶ್‍ವಿಲಿ(ಕ್ರಿ.ಶ.1817 ರಿಂದ 1845) ಹಾಗೂ ವಿಡಂಬನಾತ್ಮಕ ಕಾಮಿಡಿಗಳ ರಚನೆಯಲ್ಲಿ ಜಿಯಾರ್ಜಿ ಎರಸ್ತಾವಿಯೂ ಹೆಸರು ಗಳಿಸಿದರು. ವಾಸ್ತವವಾದಿ ಕಾದಂಬರಿಗಳ ರಚನೆಯಲ್ಲಿ ಖ್ಯಾತನಾಮರಾದ ಸಾಹಿತಿಗಳೆಂದರೆ ಲವರೆಂತಿ ಅರ್ದಾಜಿóಯಾನಿ (ಕ್ರಿ.ಶ.1815-1870) ಮತ್ತು ಇಲಿಯಾ ಶವ್‍ಚವದ್ಜೆ (ಕ್ರಿ.ಶ.1837-1907); ಜಾರ್ಜಿಯಾದ ಗುಡ್ಡಗಾಡಿನ ಜನರ ಪರ್ವತಾರೋಹಿಗಳ ಜೀವನದ ರೋಮಾಂಚಕ ಚಿತ್ರಗಳು ಅಲೆಕ್ಸಾಂಡರ್ ಕeóïಬೇಗಿ (ಕ್ರಿ.ಶ.1848-93) ಹಾಗೂ ವeóÁಪಶ್ ವೇಲಾರ (ಕ್ರಿ.ಶ.1861-1915) ರಚನೆಗಳಲ್ಲಿ ಕಾಣದೊರೆಯುತ್ತವೆ. ಈ ಯುಗದ ಅತ್ಯಂತ ಜನಪ್ರಿಯ ಕವಿಯೆಂದರೆ ಅಕಾಕ್‍ದ್ಸೆರೆತ್ ಎಲಿ (ಕ್ರಿ.ಶ.1840-1915). ಷೇಕ್ಸ್‍ಪಿಯರನ ನಾಟಕಗಳ ಭಾಷಾಂತರಕಾರನಾಗಿ ಪ್ರಖ್ಯಾತಿಗಳಿಸಿದ ಇವಾನೆ ಮೆಕಾಬೆಲಿಯ (ಕ್ರಿ.ಶ.1854-1898) ಹೆಸರನ್ನೂ ಇಲ್ಲಿ ಉಲ್ಲೇಖಿಸಬಹುದಾಗಿದೆ.

ರಾಜಕೀಯ ವ್ಯವಸ್ಥೆಯ ಬಗೆಗಿನ ಪ್ರತಿಕ್ರಿಯೆಗಳೂ ಕೆಲವೊಂದು ಸಾಹಿತ್ಯಿಕ ಕೃತಿಗಳಲ್ಲಿ ಕಾಣದೊರೆಯುತ್ತವೆ. ಡೇನಿಯಲ್ ಶೋನ್ ಕದ್ಜೆಯ (ಕ್ರಿ.ಶ.1830-60) ಕೆಲವೊಂದು ರಚನೆಗಳು ಈ ದೃಷ್ಟಿಯಿಂದ ಗಮನ ಸೆಳೆದಿವೆ. ಸಾಮ್ಯವಾದಿ ವ್ಯವಸ್ಥೆಯಲ್ಲಿ ನಲುಗಿದ ಸಾಹಿತಿಗಳೆಂದು ಹೆಸರಿಸಲಾಗಿರುವ ವ್ಯಕ್ತಿಗಳಲ್ಲಿ ಮಿಖೇಯಿಲ್ ಜವಾಖಿಶ್‍ವಿಲಿ, ಪವೊಲೋ ಅಯಾಶ್‍ವಿಲಿ ಮತ್ತು ತಿತ್ಸಿಯನ್ ತಬಿದ್ಜೆ ಮೊದಲಾದವರ ಹೆಸರುಗಳು ಕಾಣದೊರೆಯುತ್ತವೆ. ಇಷ್ಟಾಗಿಯೂ ಮೌಲಿಕ ಸರ್ಜನಾತ್ಮಕ ಸಾಹಿತಿಗಳನ್ನು ಕಾಣಿಕೆಯಾಗಿತ್ತಿರುವ ಶ್ರೇಯಸ್ಸಿನಿಂದ ಜಾರ್ಜಿಯನ್ ಸಾಹಿತ್ಯ ಹೊರತಾಗಿಲ್ಲ. ಅಯೋಸೆಬ್ ಗ್ರಿಶಾವಿಲಿಯಂಥ ಕವಿಗಳೂ ಶಲ್ವಾ ದಾದಿಯಾನಿಯಂಥ ನಾಟಕಕಾರರೂ ಗಮ್ಸಾಖುರ್ದಿಯಾನಂಥ ಕಾದಂಬರಿಕಾರರೂ ಜಾರ್ಜಿಯನ್ ಸಾಹಿತ್ಯದ ಆಶಾ ದೀಪವಾಗಿದ್ದಾರೆಂದು ಹೇಳಲಾಗಿದೆ.												(ಪಿ.ಜಿ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ